Title Image

ಕುಲಪತಿಗಳು

ಡಾ.ಎಸ್.ವಿ. ಸುರೇಶ
ಕುಲಪತಿಗಳು
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು – 560 065
+91-080-23332442
+91-080-23330277

ಕುಲಪತಿಗಳ ಸಂದೇಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯದ ಮೊಟ್ಟ ಮೊದಲನೇ ಕೃಷಿ ವಿಶ್ವವಿದ್ಯಾನಿಲಯವಾಗಿ ಹಿಂದಿನ ಮೈಸೂರು ರಾಜ್ಯದ ಶಾಸನಬದ್ಧ ಕಾಯ್ದೆಯ ಮೂಲಕ 1963ರಲ್ಲಿ ಸ್ಥಾಪನೆಯಾಯಿತು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣದ ಮೂಲಕ ದೇಶದ ಆಹಾರೋತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವೆಂದು ರಾಷ್ಟ್ರದ ದಾರ್ಶನಿಕ ನೇತಾರರು ಮನಗಂಡ ಪರಿಣಾಮವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯನ್ನೊಳಗೊಂಡು ಇನ್ನಿತರ ರಾಜ್ಯಗಳಲ್ಲಿಯೂ ಸಹ ಕೃಷಿ ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡವು. ಇದರ ಫಲವಾಗಿ ಆಹಾರೋತ್ಪಾದನೆಯಲ್ಲಿ ಅಸಾಧಾರಣವಾದ ಹೆಚ್ಚಳವನ್ನು ಕಂಡುಕೊಳ್ಳಲು ಸಾಧ್ಯವಾಗಿ ಆಂಗ್ಲ ಭಾಷೆಯ ನೂತನ ಪದಗುಚ್ಛ “ಹಸಿರುಕ್ರಾಂತಿ” ಎಂಬುದು ಉದ್ಭವವಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 1970 ಮತ್ತು 1980ರ ದಶಕದಲ್ಲಿ ತ್ವರಿತಗತಿಯ ತಾಂತ್ರಿಕತೆಗಳ ಅನ್ವೇಷಣೆಗಳ ಮೂಲಕ ಕರ್ನಾಟಕ ರಾಜ್ಯದ ಆಹಾರೋತ್ಪಾದನೆಯಲ್ಲಿ ದಿಢೀರ್ ಮುನ್ನಡೆ ಸಾಧಿಸಿದ್ದು, ಹೆಮ್ಮೆಯ ವಿಷಯವಾಗಿದೆ. ವಿಶ್ವವಿದ್ಯಾನಿಲಯದ ಅಧ್ಯಾಪಕ ವರ್ಗದ ಮಿತಿಯಿಲ್ಲದ ಉತ್ಸುಕತೆಯಿಂದ ಸಾಂಪ್ರದಾಯಕ ಆಹಾರ ಬೆಳೆಗಳಾದ ಏಕದಳ, ದ್ವಿದಳ ಮತ್ತು ಎಣ್ಣೆಕಾಳು ಬೆಳೆ ಪದ್ಧತಿಗಳನ್ನೊಳಗೊಂಡು ಆಧುನಿಕ ಹಣ್ಣಿನ ಬೆಳೆ ಪದ್ಧತಿಗಳವರೆಗೂ ಅನೇಕ ಉತ್ಪಾದನಾ ತಾಂತ್ರಿಕತೆಗಳನ್ನು ಹೊರತರಲಾಗಿದೆ. ಇದಲ್ಲದೆ, ಇನ್ನಿತರ ಕೃಷಿ ಸಂಬಂಧಿತ ವಲಯಗಳು – ರೇಷ್ಮೆ, ಅರಣ್ಯ, ಪಶುಸಂಗೋಪನೆಗಳಲ್ಲಿ ಮಹತ್ತರವಾದ ಸಾಧನೆಗಳನ್ನು ಸಾಧಿಸಿದ್ದರ ಸಲುವಾಗಿ ಕೃಷಿ, ತೋಟಗಾರಿಕೆ ಹಾಗೂ ಹೈನೋದ್ಯಮಗಳಲ್ಲಿ ಕರ್ನಾಟಕ ರಾಜ್ಯವು ಇಂದು ಮಾದರಿ ರಾಜ್ಯವಾಗಿದೆ. ಕರ್ನಾಟಕ ರಾಜ್ಯದ 2/3 ರಷ್ಟು ಪ್ರದೇಶ ಮಳೆಯಾಧಾರಿತವಾಗಿದ್ದರೂ ಸಹ ಮಹತ್ತರವಾದ ಸಾಧನೆಗಳನ್ನು ಸಾಧಿಸಲಾಗಿದೆಯೆಂಬುದು ಸಂತೋಷದ ವಿಷಯವಾಗಿದೆ. ಸುಧಾರಿತ ತಳಿಗಳು ಉತ್ತಮ ಬೆಳೆ ಪೋಷಕಾಂಶ ನಿರ್ವಹಣೆ ಪದ್ಧತಿಗಳು ಹಾಗೂ ಸುಧಾರಿತ ಬೇಸಾಯ ಪದ್ಧತಿಗಳಂತಹ ತಂತ್ರಜ್ಞಾನಗಳನ್ನು ಆಯಾ ಕೃಷಿ ಹವಾಮಾನ ವಲಯಗಳಿಗೆ ತಕ್ಕಂತೆ ಹೊರತಂದಿರುವುದರಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕೊಡುಗೆ ಪ್ರಶಂಸನೀಯವಾದುದು. ಇಷ್ಟೆಲ್ಲಾ ಹುಲುಸಾದ ಮಹತ್ತರವಾದ ಸಾಧನೆಗಳನ್ನು ಸಾಧಿಸಿದ್ದರೂ ಸಹ ಕ್ಷೀಣಿಸುತ್ತಿರುವ ಜಲಸಂಪನ್ಮೂಲಗಳು, ಹವಾಮಾನ ಬದಲಾವಣೆ, ದ್ವಿದಳ ಹಾಗೂ ಎಣ್ಣೆಕಾಳು ಬೆಳೆಗಳಲ್ಲಿ ಸುಧಾರಣೆ ಕಾಣದಿರುವ, ಇಳುವರಿ ಪ್ರಮಾಣ, ತೀವ್ರತರವಾದ ಕೀಟ ಹಾಗೂ ರೋಗದ ಬಾಧೆ, ಮಂದಗತಿಯಲ್ಲಿ ಸಾಗುತ್ತಿರುವ ಸ್ವದೇಶಿ ಯಾಂತ್ರೀಕರಣಗಳಂತಹ 21ನೇ ಶತಮಾನದ ಸಮಸ್ಯೆಗಳನ್ನು ಎದುರಿಸಬೇಕಾಗಿರುವುದು ಸವಾಲಿನ ಕೆಲಸವಾಗಿದೆ. ನೂತನ ತಾಂತ್ರಿಕತೆಗಳ ಮೂಲಕ ಜ್ವಲಂತ ಸಮಸ್ಯೆಗಳನ್ನು ನಿಭಾಯಿಸುವುದು ಹಿಂದೆಂದಿಗಿಂತಲೂ ಕಠಿಣವಾದ ಕೆಲಸವಾಗಿದೆ. ವಿಶ್ವವಿದ್ಯಾನಿಲಯವು ಸುಸ್ಥಿರ ಕೃಷಿಯ ಚೌಕಟ್ಟಿನಲ್ಲಿ ನಿಖರ ಕೃಷಿ, ಸುಧಾರಿತ ನೀರಿನ ಬಳಕೆ ಸಾಮಥ್ರ್ಯ ಮತ್ತು ಬೆಳೆಗಳಲ್ಲಿ ಜೈವಿಕ ಪ್ರತಿರೋಧಕ ಶಕ್ತಿಯನ್ನು ಅಡಕಗೊಳಿಸುವುದು, ಅಣು ತಳಿವರ್ಧನೆ ಸಂರಕ್ಷಿತ ಕೃಷಿ, ಮಳೆಯಾಧಾರಿತ ಕೃಷಿಗೆ ಹವಾಮಾನ ಚತುರ ಕೃಷಿ ಪದ್ಧತಿಗಳು, ನೀರಿನ ಉಳಿತಾಯ ಸಾಧಿಸಬಲ್ಲ ನೀರಾವರಿ ಪದ್ಧತಿಗಳು ಸಣ್ಣ ಹಿಡುವಳಿಗಳಲ್ಲಿ ಯಾಂತ್ರೀಕರಣ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯಾಧಾರಿತ ಕೃಷಿಯಂತಹ ಗಮನಾರ್ಹವಾದ ವಿಷಯಗಳಲ್ಲಿ ತನ್ನ ಸಂಶೋಧನೆಯನ್ನು ಕೇಂದ್ರಿಕರಿಸಿದೆ. ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕೃಷಿಯಲ್ಲಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಕೃಷಿ ನಾವೀನ್ಯತೆಗಳ ಪಾಲುಗಾರರೆಂಬುದನ್ನು ಬಿಂಬಿಸುವಲ್ಲಿ ಕೃಷಿ ವಿಶ್ವವಿದ್ಯಾನಿಲಯವು ಕ್ರಿಯಾತ್ಮಕವಾಗಿದೆ. ಈ ಪ್ರಯತ್ನದಲ್ಲಿ ವಿಶ್ವವಿದ್ಯಾನಿಲಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯ ಜಾಲಬಂಧುಗಳು ಕ್ರಿಯಾಶೀಲತೆಯ ಪಾತ್ರವಹಿಸಬೇಕಾಗಿದೆ. ಸವಾಲುಗಳು ಅಸಾಧಾರಣವಾಗಿದ್ದು ನಿರ್ಬಂಧಗಳು ನಿರಂತರವಾಗಿದ್ದರೂ ಸಹ, ಕೃಷಿ ವಿಶ್ವವಿದ್ಯಾನಿಲಯವು ಮುಂಬರುವ ದಶಕಗಳಲ್ಲಿ ಕೃಷಿ ವಲಯದ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನಮಗಿದೆ. ಮುಂಬರುವ ದಿನಗಳಲ್ಲಿ ಮನುಕುಲಕ್ಕೆ ನೈಸರ್ಗಿಕ ಸಾವಯವ ಆಹಾರ ಒದಗಿಸಲು ಕೃತಕ ಬುದ್ದಿಮತ್ತೆ ಕೃಷಿಗೆ ನೆರವಾಗಲಿದೆ ಎಂದು ಭಾವಿಸುತ್ತೇನೆ. ವಿಶ್ವವಿದ್ಯಾನಿಲಯವು ಭಾರತ ದೇಶದಲ್ಲಿ ಹೆಗ್ಗಳಿಕೆಯ ಸ್ಥಾನಗಳಿಸಿಕೊಂಡು ಬರುವುದಲ್ಲದೆ ಹಸಿವು ಮುಕ್ತ ಪ್ರಪಂಚ ನಿರ್ಮಿಸುವಲ್ಲಿ ತನ್ನದೇ ಆದ ಕೊಡುಗೆಗಳನ್ನು ನಿರಂತರವಾಗಿ ನೀಡುವಂತೆ ಮಾಡುವುದು ನನ್ನ ದೃಷ್ಟಿಕೋನವಾಗಿದೆ.

ಡಾ.ಎಸ್.ವಿ. ಸುರೇಶ

    • ಪುಟ ಸಂದರ್ಶಕರ ಸಂಖ್ಯೆ:
    • ಕೊನೆಯದಾಗಿ ನವೀಕರಿಸಲಾಗಿದೆ: ಮೇ 19, 2023
    • ಸೈಟ್ ಅಂಕಿಅಂಶಗಳು